ಬವೆನ್, ನಾರ್ಮನ್ ಲೆವಿ
1877-1956. ಕೆನಡಾ ದೇಶದ ಪ್ರಾಯೋಗಿಕ ಶಿಲಾವಿಜ್ಞಾನಿ (ಎಕ್ಸ್‍ಪೆರಿಮೆಂಟಲ್ ಪೆಟ್ರಾಲಜಿಸ್ಟ್) ಮತ್ತು ಖನಿಜರಸಾಯನವಿಜ್ಞಾನಿ. ಜನನ: ಕಿಂಗ್‍ಸ್ಟನ್ 21-6-1877, ಮರಣ: ಫ್ಲಾರಿಡಾ, 11-9-1956. ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಎಂ. ಎಸ್. ಪದವಿ ಪಡೆದು (1907), ಸಿಲಿಕೇಟ್ ದ್ರವಗಳ ಸಮತೋಲ ಪ್ರಾವಸ್ಥೆಗಳನ್ನು (ಫೇಸ್ ಈಕ್ವಿಲಿಬ್ರಿಯಮ್ ಸ್ಟಡೀಸ್ ಆನ್ ಸಿಲಿಕೇಟ್ ಮೆಲ್ಟ್ಸ್) ಕುರಿತು ಸಂಶೋಧನೆ ನಡೆಸಿ, ಮ್ಯಾಸೆಚೂಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಲ್ಲಿಸಿ, ಆ ಸಂಸ್ಥೆಯಿಂದ ಪಿಎಚ್.ಡಿ. (ಡಾಕ್ಟೊರೇಟ್) ಪದವಿ ಗಳಿಸಿದರು. 1912ರಲ್ಲಿ ಕಾರ್ನಗೀ ಇನ್‍ಸ್ಟಿಟ್ಯೂಟಿನಲ್ಲಿ ಸಹಾಯಕ ಶಿಲಾವಿಜ್ಞಾನಿಯಾಗಿ ಸೇರಿ ಸಿಲಿಕೇಟ್ ದ್ರವಗಳ ಮೇಲಿನ ತಮ್ಮ ಅಧ್ಯಯನಗಳನ್ನು ಮುಂದುವರಿಸಿದರು. ಅಗ್ನಿ ಶಿಲಾವಿಕಾಸದ ಹಂತಗಳ ಉತ್ತರ ಪರಿಸ್ಥಿತಿಗಳು ಎಂಬ ಶಿಲಾಜನಕ ತತ್ತ್ವಗಳನ್ನು ವಿಶದೀಕರಿಸುವ ಇವರ ಲೇಖನ (1915) ಗಣ್ಯ ಶಿಲಾವಿಜ್ಞಾನಿಗಳ ಗಮನವನ್ನು ಇವರತ್ತ ಸೆಳೆಯಿತು. ಕ್ವೀನ್ಸ್ ವಿಶ್ವವಿದ್ಯಾಲಯ ಇವರನ್ನು 1918ರಲ್ಲಿ ಖನಿಜ ವಿಜ್ಞಾನದ ಪ್ರಾಧ್ಯಾಪಕರಾಗಿ ನೇಮಿಸಿತು. ಅಲ್ಲಿ ಇವರು ಹೆಚ್ಚು ಕಾಲವಿರದೆ 1920ರಲ್ಲಿ ವಾಷಿಂಗ್‍ಟನ್ನಿಗೆ ಹಿಂತಿರುಗಿ, ತಮಗೆ ಪ್ರಿಯವಾದ ಸಿಲಿಕೇಟ್ ದ್ರವಗಳ ಮೇಲಿನ ಪ್ರಯೋಗ ಪಠನದಲ್ಲಿ ತೊಡಗಿ, ವಿಧವಿಧವಾಗಿ ಅಗ್ನಿಶಿಲಾಜನನಗಳ ರೀತಿಯನ್ನು ವಿವರಿಸುವಂಥ ಲೇಖನಗಳನ್ನು ಬರೆದರು. ಈ ಫಲಿತಾಂಶಗಳ ಆಧಾರದ ಮೇಲೆ ಶಿಲಾಪಾಕಗಳು (ಮ್ಯಾಗ್ಮ) ಸ್ಫಟಿಕೀಕರಣ ವಿಭಜನೆಗೊಳಗಾದಾಗ ಉದ್ಭವವಾಗುವ ವಿವಿಧ ಖನಿಜ ಸಮೂಹಗಳ ಪರಸ್ಪರ ಪ್ರತಿಕ್ರಿಯಾ ಸಂಬಂಧಗಳನ್ನು ವಿವರಿಸುವಂಥ ಒಂದು ಮೂಲಸಿದ್ಧಾಂತವನ್ನು ಸ್ಥಾಪಿಸಿ, ಶಿಲಾಜನನ ಮತ್ತು ಶಿಲಾವಿಕಾಸಗಳ ಪಠಣಕ್ಕೆ ಹೊಸ ಮಾರ್ಗವನ್ನೇ ರೂಪಿಸಿದರು.

	ಪ್ರಕೃತಿಯಲ್ಲಿ ಪ್ರತ್ಯಕ್ಷವಾಗಿ ಕಂಡುಬರುವ ಸುಪ್ರಸಿದ್ಧ ಶಿಲಾಸಮೂಹ ಕ್ಷೇತ್ರಗಳಾದ ದಕ್ಷಿಣ ಆಫ್ರಿಕದ ಬುಷ್‍ವೆಲ್ಡ್ ಕಾಂಪ್ಲೆಕ್ಸ್, ಪೂರ್ವ ಆಫ್ರಿಕದ ಬಹಿಸ್ಸರಣಕ್ಷಾರ ಶಿಲೆಗಳು, ನಾರ್ವೆಯ ಫೆನ್ ಪ್ರದೇಶದ ಕ್ಷಾರ ಶಿಲಾಸರಣಿಗಳು ಮತ್ತು ಸ್ಕಾಟ್‍ಲೆಂಡಿನ ಮಹಾಪ್ರತ್ಯಾಮ್ಲಿತ ಶಿಲೆಗಳಾದ ಪೆರಿಡೊಟೈಟ್ ಡೈಕುಗಳು ಇವನ್ನೆಲ್ಲ ಪರಿಶೀಲಿಸಿ ಇವುಗಳಲ್ಲಿ ಕಂಡುಬರುವ ಶಿಲಾರಚನೆ, ಶಿಲಾರಾಸಾಯನಿಕ ಸಂಯೋಜನೆ, ಶಿಲಾವರ್ಗೀಕರಣ ಮತ್ತು ಶಿಲಾವಿಕಾಸಗಳು ತಮ್ಮ ಪ್ರಯೋಗಗಳ ಫಲಿತಾಂಶಗಳನ್ನು ಉದಾಹರಿಸುವ ಹಲವಾರು ನಿದರ್ಶನಗಳನ್ನು ಒಳಗೊಂಡಿವೆಯೆಂದು ಸಮರ್ಥಿಸಿದರು. 1927ರಲ್ಲಿ ಇವರು ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೀಡಿದ ಶಿಲಾವಿಕಾಸ ಮತ್ತು ಶಿಲಾ ಜನನಗಳ ಬಗೆಗೆ ಮಾಡಿದ ಉಪನ್ಯಾಸಗಳನ್ನು ಅಗ್ನಿಶಿಲಾ ವಿಕಾಸವೆಂಬ ಸುಪ್ರಸಿದ್ಧ ಗ್ರಂಥವಾಗಿ ಪ್ರಕಟಿಸಿ (1928) ಪ್ರಪಂಚದಲ್ಲಿ ಒಬ್ಬ ಅದ್ವಿತೀಯ ಶಿಲಾವಿಜ್ಞಾನಿ ಎಂದು ಖ್ಯಾತರಾದರು. ತಮ್ಮ ಸಹೋದ್ಯೋಗಿಗಳಾದ ಜೆ.ಎಫ್.ಪೈರೆರ್, ಒ.ಎಫ್.ಟಟ್ಟಲ್, ಓಲಾಫ್-ಆಂಡರ್‍ಸನ್, ಜೆ.ಡಬ್ಲ್ಯೂ. ಗ್ರೀಗ್ ಮತ್ತು ಜಿ.ಡ್ಲ್ಯೂ. ಮೋರೆ ಇವರ ಸಹಕಾರದಿಂದ ಬವೆನ್, ಸಿಲಿಕೇಟ್‍ದ್ರವ ಸಮೂಹಗಳ ಮೇಲೆ ಮಾಡಿದ ಪ್ರಯೋಗ ಫಲಿತಾಂಶಗಳನ್ನು ವಿವರಿಸುವ ನೂರಾರು ಉನ್ನತ ವೈಜ್ಞಾನಿಕ ಲೇಖನಗಳನ್ನು ಸುಪ್ರಸಿದ್ಧ ವೈಜ್ಞಾನಿಕ ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

	ಬವೆನರನ್ನು ಶಿಕಾಗೋ ವಿಶ್ವವಿದ್ಯಾಲಯ 1937ರಲ್ಲಿ ಹಚಿನ್‍ಸನ್ ಪ್ರೊಫೆಸರ್ ಆಫ್ ಪೆಟ್ರಾಲಜಿಯಾಗಿ ನೇಮಿಸಿತು. ಅಂದಿನಿಂದ ಹತ್ತು ವರ್ಷಗಳ ಪರ್ಯಂತ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಕ್ಷಾರದ್ರವಣ ಸಮೂಹಗಳ ಮೇಲೆ ಪ್ರಯೋಗ ಪಠಣಕ್ಕೆ ಉತ್ತೇಜನ ಕೊಟ್ಟರು. ಇಲ್ಲಿ ಒಂದು ಹೊಸ ಶಿಷ್ಯ ಪಂಥವನ್ನು ತರಬೇತು ಮಾಡಿ ಅವರುಗಳಿಂದ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆಸಿದರು. ಈ ಪ್ರಯೋಗಗಳ ಸಾರಾಂಶಗಳನ್ನು ಒಟ್ಟುಗೂಡಿಸಿ ವಿಮರ್ಶೆ ಮಾಡಿ ಕ್ಷಾರಶಿಲೋದ್ಭವನದ ಮೇಲೆ ಹೊಸ ಬೆಳಕು ಚೆಲ್ಲಿದರು. 1947ರ ತರುವಾಯ ಬವೆನ್ ಕಾರ್ನಗೀ ಇನ್‍ಸ್ಟಿಟ್ಯೂಟಿಗೆ ಹಿಂತಿರುಗಿ, ಶಿಲಾಜನನದ ಮೇಲೆ ನೀರಾವಿ ಮತ್ತು ಇತರ ಅನಿಲಗಳ ಪ್ರಭಾವಗಳನ್ನು ಪರಿಶೀಲಿಸುವಂಥ ಪ್ರಯೋಗಗಳನ್ನು ನಡೆಸಲಾರಂಭಿಸಿದರು. ಲಭ್ಯ ಫಲಿತಾಂಶಗಳ ಸಹಾಯದಿಂದ ಗ್ರಾನೈಟ್ ಶಿಲಾಸಮೂಹಗಳ ಜನನ ಸಮಸ್ಯೆಗಳನ್ನು ಬಗೆಹರಿಸುವ ಸಲಹೆಗಳನ್ನು ಮುಂದೊಡ್ಡಿದರು.

	ಬವೆನ್ ಅವರಿಗೆ ದೊರೆತ ಪುರಸ್ಕಾರ ಪರಂಪರೆಗಳ ಮುಖ್ಯವಾದವು ಈ ಮುಂದಿನ ಸಂಸ್ಥೆಗಳು ನೀಡಿದ ಪದಕಗಳು: ಲಂಡನ್ನಿನ ಜಿಯಾಲಾಜಿಕಲ್ ಸೊಸೈಟಿ 1931, ಅಮೆರಿಕದ ಜಿಯಾಲಾಜಿಕಲ್ ಸೊಸೈಟಿ 1943, ಕೆನಡಾ ರಾಯಲ್ ಸೊಸೈಟಿ 1950 ಮತ್ತು ನೆದರ್ಲೆಂಡ್ಸಿನ ರಾಯಲ್ ಅಕಾಡೆಮಿ 1954.
(ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ